Wednesday, June 14, 2023

ಅನು-ಸೂರ್ಯ









ಪ್ರತಿದಿನ ನೀ ಹಾಜರ್

ಆಗಲ್ಲವೇ ನಿನಗೆ ಬೇಜಾರ್

ಭೂಮಿಗೆ ತೋರುಸು ನಿನ್ನ ಮುನಿಸು

ಒಂದು ದಿನ…

ನಿನ್ನ ಬದಲಿಗೆ ಚಂದ್ರನ ಕಳುಹಿಸು!


ನಿನ್ನ ಆಗಮನಕೆ

ಹಕ್ಕಿಗಳ ಚಿಲಿಪಿಲಿಯೇ ಸ್ವಾಗತ

ಹಿಬ್ಬನಿಯ ಸಿಂಚನ

ನಿನ್ನ ನಿರ್ಗಮನಕೆ

ದೀಪದ ಬೆಳಕಿನ ಬೀಳ್ಕೊಡುಗೆ

ಎಣ್ಣೆ ಮುಗಿಯೋವರೆಗು

ಬತ್ತಿ ಉರಿಯೋವರೆಗು!

ಹಣತೆಯ ಅಣತಿಯಂತೆ

ಗುಂಡಿ ನೀರು ಬತ್ತುವವರೆಗು!

ಭತ್ತದ ತೆನೆಯು ಬೀಳುವವರೆಗು..


ಒಂದು ದಿನ…

ಧಣಿದು ಸುಸ್ತಾಗಿ ಉಳಿದು ಬಿಡು ಇಲ್ಲೇ

ಯಾರಿಗೂ ಗೋಚರಿಸದಂತೆ  ಮೋಡದ ಮರೆಯಲ್ಲೆ


ಸಂಜೆಯಾಯಿತೆಂದು

ಪ್ರಾಣಿ ಪಕ್ಷಿಗಳೆಲ್ಲ ಗೂಡು ಸೇರಲಿ

ಬಾರು ಪಬ್ಗಳಲಿ ಬಾಟಲಿಗಳು ತೆರೆಯಲಿ

ಸಂದಿಗೊಂದಿಗಳಲಿ ಸುಖಕೂ ಚೌಕಾಸಿ ಶುರುವಾಗಲಿ

ನಶೆಯಲಿ ದುರ್ಜನರೆಲ್ಲ ತೇಲುತಲಿರಲಿ

ಕಳ್ಳರು ಕಿಸೆಯಿಂದ ಕಾಂಚಾಣವನೆಲ್ಲ ಪಂದ್ಯದ ಪಣಕಿಡಲಿ


ಚಂದ್ರ ಬೆಳದಿಂಗಳಿಟ್ಟು ನಗುತ್ತಿದ್ದ 

ಜಗದ ಜೂಜಾಟ ನೋಡಿ

ಹೊಸ ನಿಯಮ ಬರೆದು ಮಾಡಿಬಿಡು

ನಿನ್ನ ಕಿರಣ ಸ್ಪರ್ಷದಿಂದ ಮೋಡಿ

ಕಲಿಯುಗದ ಈ ಕರ್ಮಕ್ಕೆ ಕೊನೆಯುಂಟೆ?

ಅಂದು ತಪ್ಪಿಸಿದ್ದರೆ ನಿನ್ನ ಪುತ್ರನ ತೊಡೆಕೊರೆಯುವ ಹುಳುವೊಂದರ ಕಾಟ

ಕುರುಕ್ಷೇತ್ರದಲಿ ಕರ್ಣ  ಸೋಲಿತಿದ್ದುದುಂಟೆ?

ಮರುಕಳಿಸೀತು ಮತ್ತೊಂದು ಮಹಾಯುದ್ದದಾಟ

ಇಂದು ಕಲಿಸಿಬಿಡು ಪಕ್ಷಪಾತಕರಿಗೊಂದು ಪಾಠ

ಗುಂಗೆಹುಳು ಜನರ ಕಿವಿಯಲಿ ಹೂವಿಟ್ಟು

ತಿಳಿಸಿ ಬಿಟ್ಟಾನು ಇವರಿಗೆಲ್ಲ ನೀನು ಅಡಗಿರುವ ಗುಟ್ಟು

ಕೊಟ್ಟುಬಿಡು ಜನರಿಗಿಂದು  ಮರೆಯಲಾಗದ ಪೆಟ್ಟು


ಸುಟ್ಟುಬಿಡು ಪರಮಾಣು ಅಸ್ತ್ರ

ಬಿಟ್ಟುಬಿಡು ಅಪರಿಮಿತ ಶಾಸ್ತ್ರ


ಸುಟ್ಟುಬಿಡು ಧರ್ಮವನ್ನಲ್ಲ

ಮೌಡ್ಯಗಳ ಮತಾಂಧತೆಯ 


ಸುಟ್ಟುಬಿಡು ಕನಸುಗಳನ್ನಲ್ಲ

ಕಹಿನೆನಪುಗಳ ಛಾಯೆಯ


ಸುಟ್ಟುಬಿಡು ಪ್ರೀತಿ ಪ್ರೇಮ ಸಲಿಗೆಗಳನಲ್ಲ

ಕಾಮ ಪ್ರೇತ ಪಿಶಾಚಿಗಳನ್ನ


ಸುಟ್ಟುಬಿಡು ಮುಖವನ್ನಲ್ಲ

ಮುಖವಾಡಗಳನ್ನು

ಸುಟ್ಟುಬಿಡು ಬಾಡಿಗೆತನ

ಬಿಟ್ಟುಬಿಡು ಸ್ವಂತತನ


ಸುಟ್ಟುಬಿಡು ಬಡವನ ಅನ್ನ ಬಟ್ಟೆಯನ್ನಲ್ಲ

ಕಪ್ಪುಹಣ  ಮತ್ತು  ಬಿಳಿ  ಪ್ಲಾಸ್ಟಿಕ್


ಸುಟ್ಟುಬಿಡು ಜನರನ್ನಲ್ಲ 

ಅವರ ದುರ್ನಡತೆಯ

ಶುರುವಾಗಲಿ ಸನ್ನಡತೆಯ 

ಸೂರ್ಯ ಶಕ

ಇಂದಿನಿಂದಲೇ!



                                            🖋ಹನಿ ವಿಕ್ಸ್



No comments:

Post a Comment